ಭೀಮವ್ವ, ಹರಪನಹಳ್ಳಿ

	ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಬರುವ ಒಬ್ಬ ವಿಷ್ಣುಭಕ್ತೆ. ಹುಟ್ಟಿದ್ದು 1823 ಜುಲೈ 6, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ನಾರಾಯಣ ದೇವರಕೆರೆಯಲ್ಲಿ (ಈಗ ಈ ಹಳ್ಳಿ ಹೊಸಪೇಟೆಯ ತುಂಗಭದ್ರಾ ಜಲಾಶಯದ ನೀರಿನಲ್ಲಿ ಮುಳುಗಡೆಯಾಗಿದೆ). ತಂದೆ ರಘುನಾಥಾಚಾರ್ಯ, ತಾಯಿ ರಾಘಮ್ಮ. ಮಾಧ್ವಸಂಪ್ರದಾಯಸ್ಥ ಮನೆತನ. ತಾತ ಜೋಯಿಸ ವೆಂಕಪ್ಪಾಚಾರ್ಯರು, ಸ್ವತಃ ಹರಿದಾಸರು. ಹೀಗೆ ಹರಿಮಯ ವಾತಾವರಣದಲ್ಲಿ ಬೆಳೆದ ಭೀಮವ್ವನ ಹುಟ್ಟು ಹೆಸರು ಕಮಲಾಕ್ಷಿ. ಕ್ರಮೇಣ ಭೀಮಾಬಾಯಿಯೆಂದೂ ಮುಂದೆ ಭೀಮವ್ವನೆಂದೂ ಪ್ರಸಿದ್ಧಳಾದಳು.

	ಕ್ರಮವಾದ ವಿದ್ಯಾಭ್ಯಾಸವಿಲ್ಲದ ಭೀಮವ್ವನಿಗೆ ಪುರಾಣಕತೆಗಳ ಶ್ರವಣ. ಅವರಿವರಿಂದ ಕೇಳಿದ ಭಜನೆಗಳು, ಸಂಪ್ರದಾಯದ ಹಾಡುಗಳು ಇವುಗಳಿಂದಲೇ ವಿದ್ಯೆ, ಸಂಸ್ಕಾರ, ಇವೇ ಅವಳ ಸಾಹಿತ್ಯರಚನೆಗೆ ಸ್ಪೂರ್ತಿ, ಈಕೆಗೆ ಅಸಾಧಾರಣ ಗ್ರಹಣಶಕ್ತಿ ಇತ್ತು. ಅದಕ್ಕೆ ಈಕೆಯ ಕೃತಿಗಳೇ ಸಾಕ್ಷಿ. ಒಂದು ವರ್ಷದ ಮಗುವಾಗಿದ್ದಾಗಿನ ಘಟನೆಗಳೂ ಈಕೆಗೆ ಜೀವಿತದ ಕೊನೆಯತನಕವೂ ನೆನಪಿನಲ್ಲಿತ್ತೆಂಬುದು ಈಕೆಯನ್ನು ಬಲ್ಲವರ ಹೇಳಿಕೆ. ಅವ್ವನ ಬಾಲ್ಯಜೀವನದ ಬಗ್ಗೆ ಹಲವಾರು ಪವಾಡಸದೃಶ ಕತೆಗಳು ಈಕೆಯ ಮನೆತನದವರಲ್ಲಿ ಪ್ರಚಲಿತವಿವೆÉ.

	ಭೀಮವ್ವ ಹನ್ನೊಂದು ವರ್ಷದವಳಾಗಿದ್ದಾಗ ಇಳಿವಯಸ್ಸಿನ ಮುನಿಯಪ್ಪ ಎಂಬವರೊಡನೆ ಮದುವೆಯಾಯಿತು. ಮುಂದಿನ ಹದಿನೆಂಟು ವರ್ಷಗಳಲ್ಲಿ ಇಬ್ಬರು ಮಕ್ಕಳಾದರು. ಮಗ ಹಾಜೂರು ಸೋಮರಾಯ ಮತ್ತು ಮಗಳು ಸುಬ್ಬಾಬಾಯಿ. ಆ ಸುಮಾರಿಗೇ ಮನೆಯಲ್ಲಿ ಕಳ್ಳತನವಾಗಿ ಬಡತನದ ಬಾಳು ಪ್ರಾರಂಭ. ಅಲ್ಲಿಂದ ಮುಂದೆ ಮುನಿಯಪ್ಪನ ಸಾವು : ಕೇವಲ 36 ವರ್ಷದಲ್ಲೆ ಅವ್ವನಿಗೆ ವೈಧವ್ಯ ಪ್ರಾಪ್ತಿ. ಇದು ಈಕೆಯ ಜೀವನದಲ್ಲಿ ಪ್ರಮುಖ ತಿರುವು. ಅಲ್ಲಿಂದ ಹಾಡುಗಳ ರಚನೆ ಪ್ರಾರಂಭವಾಯಿತು. ಹರಿಪರವಾದ ಹಾಡುಗಳ ರಚನೆಯಿಂದ ಅವ್ವ ಭಕ್ತಿಸಾಧನೆಗೆ ಮೊದಲಿಟ್ಟಳು. ಚಿಕ್ಕವಯಸ್ಸಿನಲ್ಲಿ ಒದಗಿದ ವೈಧವ್ಯ ಈಕೆಯ ಭಕ್ತಿ ಸಾಧನೆಗೆ ಒತ್ತಾಸೆಯಾಯಿತು. ಅವ್ವನ ಜೀವನದಲ್ಲಿ ಸ್ವಪ್ನಗಳಿಗೆ ಬಹಳ ಪ್ರಾಮುಖ್ಯವಿದೆ. ಸ್ವಪ್ನದಲ್ಲಿ ನಾರದರಿಂದ ಅವ್ವನಿಗೆ 'ಭೀಮೇಶಕೃಷ್ಣ ಎಂಬ ಅಂಕಿತ ದೊರೆಯಿತಂತೆ. ಆಕೆಗೆ ಸ್ಫುರಿಸುತ್ತಿದ್ದ ಪ್ರತಿಯೊಂದು ಹಾಡಿಗೂ ಮೊದಲು ಅದಕ್ಕೆ ಸಂಬಂಧಿಸಿದ ವ್ಯಕ್ತಿ. ವಸ್ತು ಅಥವಾ ಘಟನೆಗಳನ್ನು ಕುರಿತು ಸ್ವಪ್ನವಾಗುತ್ತಿದ್ದಿತಂತೆ. ಮಾರನೆಯ ಬೆಳಗ್ಗೆ ಓತಪ್ರೋತವಾಗಿ ಹಾಡುಬರಲು ಪ್ರಾರಂಭ : ಹೀಗೆ ನಿರಂತರವಾಗಿ ಸ್ವಪ್ನಗಳನ್ನು ಕಾಣುತ್ತ ಭೀಮೇಶಕೃಷ್ಣ ಅಂಕಿತದಲ್ಲಿ ಅವ್ವ ರಚಿಸಿರುವ ಒಟ್ಟು 149 ಹಾಡುಗಳು ದೊರೆತಿವೆ. ಅವುಗಳಲ್ಲಿ 143 ಸಣ್ಣವು, 6 ದೊಡ್ಡವು.

	ಸಣ್ಣಹಾಡುಗಳು ಕಾಶೀವಿಶ್ವೇಶ್ವರ ಗಂಗಾಧರ ಎನ್ನುವ ಮೂರು ನುಡಿಗಳ ಹಾಡಿನಿಂದ ಸರ್ಪಭೂಷಣಸುತನ ಭಕ್ತಿಯಿಂದ ಬಲಗೊಂಬೆ ಎನ್ನುವ 193 ನುಡಿಗಳ ಸುಧಾಮನ ಹಾಡಿನವರೆಗೂ ವ್ಯಾಪ್ತಿ ಪಡೆದಿವೆ. ದೊಡ್ಡ ಹಾಡುಗಳು__ ನಳಚರಿತ್ರೆ, ಮುಯ್ಯದಹಾಡು, ಪತಿದಾನಕೊಟ್ಟ ಹಾಡು, ಶಕುಂತಲ-ದುಷ್ಯಂತ ಮಹಾರಾಜನ ಹಾಡು, ರತಿಕಲ್ಯಾಣ ಮತ್ತು ಸುಭದ್ರಾಕಲ್ಯಾಣ__ಇವು ಒಂದೊಂದೂ ಬೇರೆ ಬೇರೆ ಧಾಟಿಗಳಿಗೆ ಅನುಗುಣವಾಗಿ ಬೇರೆ ಬೇರೆ ಧ್ವನಿಗಳಲ್ಲಿ ರಚಿತವಾಗಿದ್ದು ಖಂಡಕಾವ್ಯಗಳಂತಿವೆ. ಪ್ರಮುಖವಾಗಿ ರಾಮಾಯಣ ಮಹಾಭಾರತ ಭಾಗವತಗಳ ಘಟನೆಗಳೇ ಅವ್ವನ ಹಾಡುಗಳ ವಸ್ತು. ಹರಿದಾಸರ ಸಂಪ್ರದಾಯದಂತೆ ಕೀರ್ತನೆ (ಹಾಡುಗಳು), ಸುಳಾದಿ (ಉದಾ. 'ಇಂದು ಎನಗೆ ಸಂದರುಶನ ಸುಖ') ಉಗಾಭೋಗ (ಉದಾ. 'ನಿಗಮಗೋಚರ ಸ್ವಾಮಿ) ಈ ಮೂರು ಪ್ರಕಾರಗಳನ್ನೂ ಅವ್ವನ ರಚನೆಗಳಲ್ಲಿ ಗುರುತಿಸಬಹುದು. ಮಧ್ವಮತ ತತ್ತ್ವಗಳು ಅವ್ವನ ರಚನೆಗಳಲ್ಲಿ ಪ್ರತಿಪಾದಿತವಾಗಿವೆ. ಮಾಧ್ವರಿಗೆ ಮುಖ್ಯವಾದ ಹನುಮ ಭೀಮ ಮಧ್ವ ಗುರುಗಳ (ಈ ಅವತಾರತ್ರಯದ) ಸ್ತುತಿಯೂ ಅವ್ವನ ಹಾಡುಗಳಲ್ಲಿ ಮತ್ತೆ ಮತ್ತೆ ಬರುತ್ತದೆ.

	ಭೀಮವ್ವನ ರಚನೆಗಳನ್ನು ಒಟ್ಟಾಗಿ ಪರಿಭಾವಿಸಿದಾಗ ವರ್ಣನಾಕುಶಲತೆ, ಸಂಭಾಷಣಾಚತುರತೆ, ತತ್ತ್ವನಿರೂಪಣೆ, ಸಂಪ್ರದಾಯಪ್ರಿಯತೆಗಳು ಅವುಗಳ ಪ್ರಧಾನಲಕ್ಷಣಗಳಾಗಿ ಕಂಡುಬರುತ್ತವೆ. ತೀರ್ಥಕ್ಷೇತ್ರಗಳ ವರ್ಣನೆ, ಕ್ಷೇತ್ರಮೂರ್ತಿಗಳ ಸ್ತುತಿಗಳೂ ಅಲ್ಲಲ್ಲಿ ಬಂದಿವೆ. ತಿರುಪತಿ-ತಿಮ್ಮಪ್ಪ, ಉಡುಪಿ ಶ್ರೀಕೃಷ್ಣ, ಕೊಲ್ಹಾಪುರ_ಲಕ್ಷ್ಮೀದೇವಿ ಇತ್ಯಾದಿ. ಅವ್ವನ ರಚನೆಗಳು ಆದರ್ಶೀಕೃತ ಸಮಷ್ಟಿ ತತ್ತ್ವಗಳನ್ನು ಹೇಳಲು ಹೊರಟಿಲ್ಲವಾದರೂ ಸಾಂಸಾರಿಕ ವಲಯದಲ್ಲಿಯ ಭಾವಸಂಕೀರ್ಣಗಳು, ಸಂಬಂಧಸೂಕ್ಷ್ಮಗಳು ಮತ್ತು ವ್ಯಕ್ತಿಗಳ ಮಾನಸಿಕ ತುಮುಲಗಳು ಹಾಡುಗಳಲ್ಲಿ ಆಡುಮಾತುಗಳ ಮೂಲಕ ಜೀವಂತಿಕೆಯನ್ನು ಪಡೆದಿವೆ. ಆಡುಮಾತಿನ ಸೊಗಡು, ಹಾಸ್ಯದ ನವುರು, ಪಾತ್ರಗಳ ಕಂಡರಣೆ, ಸನ್ನಿವೇಶಗಳ ಜೀವಂತಿಕೆ, ನೇರವಾಗಿ ಹೇಳುವ ಎದೆಗಾರಿಕೆ ಈ ಎಲ್ಲ ಲಕ್ಷಣಗಳಿಂದಾಗಿ ಅವ್ವನ ಹಾಡುಗಳಿಗೆ ಜನತೆ ಸ್ಪಂದಿಸಿದೆ; ಅವನ್ನು ಕಾವ್ಯವಾಗಿ ಸ್ವೀಕರಿಸಿದೆ. ಜನರ ನಿತ್ಯಜೀವನವೇ ಅವ್ವನ ಹಾಡಾಗಿ ಮೂಡಿದೆ. ಅದರಲ್ಲೂ ಉತ್ತರ ಕರ್ನಾಟಕದ ಮಾಧ್ವ ಬ್ರಾಹ್ಮಣ ಸಮಾಜದ ಸಾಂಸಾರಿಕ ಪರಿಸರವೇ ಈ ಹಾಡುಗಳಲ್ಲಿ ಪುನಾರಚಿತವಾಗಿದೆ ಎನ್ನಬಹುದು.

	ಈಕೆ 1903 ಜನವರಿ 11ರಂದು ನಿಧನಳಾದಳು.				
(ಟಿ.ಎನ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ